ಭಟ್ಕಳ: ರಾಜ್ಯ ಕಾನೂನು ಸೇವಾಪ್ರಾಧಿಕಾರ ವತಿಯಿಂದ ರಾಜ್ಯದ್ಯಂತ ಮಾ.8 ರಂದು ನಡೆಯಲಿರುವ ಲೋಕ್ ಅದಾಲತ್ ಭಟ್ಕಳದ ಹಿರಿಯ ಶ್ರೇಣಿಯ ನ್ಯಾಯಾಲಯ, ಪ್ರಥಮ ದರ್ಜೆ ನ್ಯಾಯಾಲಯ ಹಾಗೂ ಹೆಚ್ಚುವರಿ ನ್ಯಾಯಾಲಗಳಲ್ಲಿಯೂ ನಡೆಯಲಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಕಾಂತ ಕುರಣಿ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಟ್ಕಳ ತಾಲೂಕಿನ ಮೂರು ನ್ಯಾಯಾಲಯಗಳಲ್ಲಿಲೋಕ್ ಅದಾಲತ್ ನಡೆಯುತ್ತಿದ್ದು, ರಾಜೀಯಾಗತಕ್ಕ ಸುಮಾರು 1500 సివిల్ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ಇತ್ಯರ್ಥಪಡಿಸುವಲ್ಲಿ ಕ್ರಮ ವಹಿಸಲಾಗಿದೆ. ಈಗಾಗಲೇ ವಕೀಲರು, ಕಕ್ಷಿದಾರರು, ಬ್ಯಾಂಕ್ ವ್ಯವಸ್ಥಾಪಕರು, ಪೊಲೀಸ್ ಇಲಾಖೆ ಇವರನ್ನು ಸೇರಿಸಿ ಅಭಿಪ್ರಾಯ ಸಂಗ್ರಹಿಸಿದ್ದು ಹೆಚ್ಚಿನ ಸಹಕಾರ ದೊರೆತಿದೆ ಎಂದರು.
ಸಾರ್ವಜನಿಕರು ಲೋಕ್ ಅದಾಲತ್‌ನ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಂತೆ ಕೋರಿದರು.
ಸಿವಿಲ್ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಧನವತಿ ಮಾತನಾಡಿ, ಲೋಕ ಅದಾಲತ್‌ನಲ್ಲಿ ಎರಡೂ ಕಕ್ಷಿದಾರರು ಗೆದ್ದಂತೆಯೇ ಇರುತ್ತದೆ. ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲಾದ సివిಲ್ ಪ್ರಕರಣದಲ್ಲಿ ನ್ಯಾಯಾಲಯದ ಶುಲ್ಕವನ್ನು ಕೂಡಾ ಹಿಂತಿರುಗಿಸುವುದರಿಂದ ಕಕ್ಷಿದಾರರಿಗೆ ಸಮಯ ಹಾಗೂ ಹಣವು ಕೂಡ ಉಳಿತಾಯವಾಗುತ್ತದೆ. ಲೋಕ ಅದಾಲತ್‌ನಲ್ಲಿ ಕ್ರಿಮಿನಲ್ ಪ್ರಕರಣ, ಸಿವಿಲ್ ಪ್ರಕರಣ, ಐಪಿಸಿ, ಮೋಟಾರು ವಾಹನ ಪ್ರಕರಣ, ಬಿಎನ್‌ಎಸ್‌ಎಸ್, ಪಾಲುಪಟ್ಟಿ ಪ್ರಕರಣ, ಹಣ ರಿಕವರಿ ಪ್ರಕರಣ, ಚೆಕ್‌ಬೌನ್ಸ್ ಕೇಸ್‌ಗಳು, ವಿಮಾ ಕಂಪೆನಿಗಳ ಪ್ರಕರಣ, ಜೀವನಾಂಶ, ವಿಚ್ಛೇದನ ಸೇರಿದಂತೆ ರಾಜೀಯಾಗತಕ್ಕ ಎಲ್ಲಾ ಪ್ರಕರಣಗಳನ್ನು ಕೂಡಾ ತೆಗೆದುಕೊಳ್ಳಲು ಅವಕಾಶ ಇದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಸಮಿತಿ ಕಾವ್ಯದರ್ಶಿ ದೀಪಾ ಅರಳಗುಂಡಿ ಉಪಸ್ಥಿತರಿದ್ದರು.