ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳನ್ನು ಚಿಕ್ಕಂದಿನಿಂದಲೇ ಅವರ ವಿಜ್ಞಾನ, ಸಂಶೋಧನೆಗೆ ಪ್ರೇರೆಪಿಸಿ ಪ್ರೋತ್ಸಾಹಿಸಬೇಕಿದೆ – ಎಂ.ಕೆ.ನಾಯ್ಕ

ಭಟ್ಕಳ : ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ‌ ಶಾಲೆ
ಭಟ್ಕಳ ಇವರಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರಯೋಗದ ಮಾದರಿಗಳ ಪ್ರದರ್ಶನವು ಶುಕ್ರವಾರದಂದು ಇಲ್ಲಿನ ಚೆನ್ನಪಟ್ಟಣ ಹನುಮಂತ ದೇವಸ್ಥಾನ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಿವ್ರತ್ತ ಮುಖ್ಯಾಧ್ಯಾಪಕ
ಎಂ.ಕೆ. ನಾಯ್ಕ ಅವರು ಉದ್ಘಾಟಿಸಿ ಮಾತನಾಡಿದ್ದು ‘ವಿಜ್ಞಾನಿ ಸಿ.ವಿ. ರಾಮನ್ ಅವರ ರಾಮನ್ ಪರಿಣಾಮದ ಆವಿಷ್ಕಾರವನ್ನು ಸ್ಮರಿಸಲು ಪ್ರತಿವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ವಿಜ್ಞಾನ ದಿನ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.

ಭಾರತೀಯ ಭೌತಶಾಸ್ತ್ರಜ್ಞ ಸಿ.ವಿ. ರಾಮನ್ 1928 ರಲ್ಲಿ ರಾಮನ್ ಪರಿಣಾಮದ ಆವಿಷ್ಕಾರದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಏಷ್ಯಾದಲ್ಲೇ ವಿಜ್ಞಾನ ವಿಷಯದಲ್ಲಿ ಮೊದಲ ನೊಬೆಲ್ ಪ್ರಶಸ್ತಿ ಪಡೆದ ಕೀರ್ತಿ ಚಂದ್ರಶೇಖರ ವೆಂಕಟರಾಮನ್ ಅವರದ್ದು. ಡಾ.ಚಂದ್ರಶೇಖರ್ ವೆಂಕಟರಾಮನ್ ಅವರನ್ನು ಗೌರವಿಸುವ ಬದಲು ಈ ದಿನವನ್ನು ಆಚರಿಸಲು ಇನ್ನೊಂದು ಕಾರಣವೆಂದರೆ ವಿಜ್ಞಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮುಂಬರುವ ಪೀಳಿಗೆಗೆ ವಿಜ್ಞಾನದ ಮಹತ್ವವನ್ನು ವಿವರಿಸುವ ಉದ್ದೇಶ ಹೊಂದಿದೆ ಎಂದ ಅವರು

ಇಂದು ನಮ್ಮ ದೇಶಕ್ಕೆ ಹೆಚ್ಚು ಹೆಚ್ಚು ವಿಜ್ಞಾನಿಗಳ ಅವಶ್ಯಕತೆ ಇದೆ. ಹಾಗಾಗಿ ಪಾಲಕರು ಮಕ್ಕಳನ್ನು ಕಲಿಕೆಯ ಜೊತೆಗೆ ವಿಜ್ಞಾನದ ಆಸಕ್ತಿಯನ್ನು ರೂಢಿಸಿಕೊಳ್ಳುವಂತೆ ಮಾಡಬೇಕು.

ವಿಜ್ಞಾನವು ಸಾಕಷ್ಟು ಮುಂದುವರೆದಿದ್ದು ಮೊಬೈಲ್ ಯುಗದ ತನಕ ಬಂದು ತಲುಪಿದೆ ಮತ್ತು ಮಾಹಿತಿಗಳು ಕ್ಷಣ ಮಾತ್ರದಲ್ಲಿ ಸಿಗಲಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳನ್ನು ಚಿಕ್ಕಂದಿನಿಂದಲೇ ಅವರ ವಿಜ್ಞಾನ, ಸಂಶೋಧನೆಗೆ ಪ್ರೇರೆಪಿಸಿ ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ಪಾಲಕರದ್ದಾಗಿದೆ. ಮಕ್ಕಳಿಗೆ ಆಸ್ತಿ ಮಾಡದೇ ಅವರನ್ನೇ ಆಸ್ತಿಯನ್ನಾಗಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪತ್ರಕರ್ತ ಪ್ರಸನ್ನ ಭಟ್ಟ ಮಾತನಾಡಿ ‘ ಇಂದಿನ ಮಕ್ಕಳು ದೇಶದ ಸಂಪತ್ತು. ಅವರನ್ನು ಸಂಪತ್ತಭರಿತರನ್ನಾಗಿಸುವ ಮಾರ್ಗವೆಂದರೆ ಅದು ಜ್ಞಾನವಾಗಿದೆ. ಜ್ಞಾನ, ಶಿಕ್ಷಣದ ಜೊತೆಗೆ ಇಂದಿಗೆ ಅವಶ್ಯಕವಾದ ವಿಜ್ಞಾನ ವಿಚಾರದಲ್ಲಿ ಅವರ ಆಸಕ್ತಿದಾಯಕ ವಿಷಯದಲ್ಲಿ ಅವರನ್ನು ಪಾಲಕರು ಪ್ರೋತ್ಸಾಹಿಸಬೇಕಾಗಿದೆ. ಅವರಿಗೆ ವಿಜ್ಞಾನ ಒಂದೇ ನೀಡಿದರೆ ಸಾಲದು ಅದರೊಂದಿಗೆ ಸಂಸ್ಕಾರ ಮತ ಒಳ್ಳೆಯ ಪ್ರಜೆಯನ್ನಾಗಿಸಬೇಕು. ಮೊಬೈಲಗಳ ಸದ್ಬಳಕೆಯನ್ನು ಪಾಲಕರು ಅವರ ಮಕ್ಕಳು ಒಂದು ಹಂತಕ್ಕೆ ಬೆಳೆಯುವ ತನಕ ಗಮನ ಹರಿಸಬೇಕಾಗಿದೆ. ಮಕ್ಕಳು ಸಹ ಶಿಕ್ಷಣದ ಜೊತೆಗೆ ಪೂರಕ ಆಸಕ್ತಿಯನ್ನು ಬೆಳೆಸಿಕೊಂಡು ದೇಶಕ್ಕೆ ಉತ್ತಮ ಪ್ರಜೆಯಾಗಬೇಕಾದ ಜವಾಬ್ದಾರಿ ಸಹ ಇದೆ. ಇವೆಲ್ಲದಕ್ಕು ಅವರಲ್ಲಿ ಶಿಸ್ತು, ತಾಳ್ಮೆ, ಸಮಯ ಪ್ರಜ್ಞೆ ಅವಶ್ಯಕವಾಗಿದೆ ಎಂದರು.

ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಿ.ಎನ್.ಬಡಾಳ ಮಾತನಾಡಿ ‘ ಮಕ್ಕಳಲ್ಲಿ ವಿಜ್ಞಾನವು ಬರಬೇಕಾದರೆ ಅದು ರೂಡಿಯಿಂದ ಬರಬೇಕಿದೆ. ಚಿಕ್ಕಂದಿನಿಂದಲೇ ಅವರಿಗೆ ಯಾವುದೇ ವಿಷಯದಲ್ಲಿ ಕೂತೂಹಲ ಮತ್ತು ಪ್ರಶ್ನೆ ಉದ್ಭವವಾಗಬೇಕು. ಆಗ ಮಾತ್ರ ಅದು ವಿಜ್ಞಾನದತ್ತ ಆಸಕ್ತಿ ಮೂಡಿಸಲಿದೆ. ಇಂದಿನ ಮಕ್ಕಳೇ ಮುಂದಿನ ವಿಜ್ಞಾನಿಗಳು. ಉತ್ತಮ ತರಬೇತಿಯಿಂದ ಮಕ್ಕಳನ್ನು ವಿಜ್ಞಾನದತ್ತ ಸೆಳೆಯಲು ಸಾಧ್ಯ. ಎಲ್ಲರು ಸಹ ಬಹುತೇಕವಾಗಿ ಚಿಕ್ಕಂದಿನಲ್ಲಿ ಸಿಕ್ಕ ವಸ್ತುಗಳಿಂದ ಏನನ್ನಾದರು ವಿಜ್ಞಾನ ಸಹಿತ ಪ್ರಯೋಗ ಮಾಡಿದ್ದೇವೆ. ಅದಕ್ಕೆ ಸರಿಯಾದ ಮಾರ್ಗದರ್ಶನ ಬೇಕಿದೆ. ಈ ಮಾರ್ಗದರ್ಶನ ನೀಡಲು ನಾನು ಸಿದ್ದನಿದ್ದೇನೆ ಎಂದರು.

ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಹರೀಶ ದೇವಾಡಿಗ ಮಾತನಾಡಿ ‘ಕನ್ನಡ ಶಾಲೆಯ ಮಕ್ಕಳೇ ಮುಂದೆ ವಿಜ್ಞಾನಿಗಳಾಗಬೇಕು ಎಂಬ ಆಶಯ ‌ನಮ್ಮದು. ಕನ್ನಡ ಶಾಲೆಯು ಎಲ್ಲಾ ಹಂತದಲ್ಲಿಯು ಮುಂದೆ ಬರಬೇಕು. ಕನ್ನಡ ಶಾಲೆಗೆ ಪಾಲಕರು ಮಕ್ಕಳ ಸೇರ್ಪಡೆ ಹೆಚ್ಚಾಗಿ ಮಾಡಬೇಕು. ಕಾರಣ ನಮ್ಮ ಶಾಲೆಗಳ ಏಳಿಗೆಗೆ ಶಿಕ್ಷಕರಿಗೆ ಪಾಲಕರ ಸಾಥ್ ಪ್ರಮುಖವಾದದ್ದು. ನಮ್ಮಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕಾಗಿದೆ ಎಂದರು.

ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಸುಶೀಲಾ ಮೊಗೇರ ಉಪಸ್ಥಿತರಿದ್ದರು.

ಶಾಲೆಯ ಮುಖ್ಯಾಧ್ಯಾಪಕ ಜನಾರ್ದನ ಮೊಗೇರ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ
ಮಕ್ಕಳನ್ನು ಹೆಚ್ಚಾಗಿ ವೈಜ್ಞಾನಿಕವಾಗಿ ವಿಜ್ಞಾನದತ್ತ ಹೆಚ್ಚಿನ ಒತ್ತು ನೀಡಬೇಕು. ಈ‌‌ ವಿಜ್ಞಾನ ಪ್ರಯೋಗಕ್ಕೆ ಮಕ್ಕಳ ಜೊತೆಗೆ ಶಿಕ್ಷಕರು ಸಹ ಒಂದು ತಿಂಗಳ ಹಿಂದೆಯಿಂದ ಇದಕ್ಕಾಗಿ ತಯಾರಿ ಮಾಡಿದ್ದೇವೆ. ಶಾಲಾ ಶಿಕ್ಷಕರು ಇದಕ್ಕೆ ಶ್ರಮ ಹಾಕಿದ್ದಾರೆ. ಮಕ್ಕಳ‌ ಪಾಲ್ಗೊಳ್ಳುವಿಕೆ ಹೆಚ್ಚಿದೆ. ಪಾಲಕರು ಇದಕ್ಕೆ ಹೆಚ್ಚಿನ‌ ಆಸಕ್ತಿಗೊಂಡು ಮಕ್ಕಳಿಗೆ ಪ್ರೇರಣೆ ನೀಡಬೇಕಿದೆ. ಗ್ರಹಣವನ್ನು ವೈಜ್ಞಾನಿಕವಾಗಿ ಅರಿತುಕೊಳ್ಳಬೇಕಾಗಿರುವುದು ನಾವು ಶಿಕ್ಷಕರ ಪಾಲಕರ ಪಾತ್ರವಾಗಿದೆ ಎಂದರು.

ಶಾಲಾ ಶಿಕ್ಷಕಿ ಪದ್ಮ ನಾಯ್ಕ ಎಲ್ಲರನ್ನು ವಂದಿಸಿದರು.

ಇದಕ್ಕೂ ಪೂರ್ವದಲ್ಲಿ ಶಾಲೆಯ 1ನೇ ತರಗತಿ ಯಿಂದ 7 ತರಗತಿಯ 66 ವಿದ್ಯಾರ್ಥಿಗಳೆಲ್ಲರು ವಿವಿಧ ಮಾದರಿಯ ವಿಜ್ಞಾನ ಪ್ರಯೋಗವನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಮತ್ತು ಪಾಲಕರ ಮುಂದೆ ಮಂಡಿಸಿ ಅತಿಥಿಗಳ ಪ್ರಶ್ನೆಗೆ ಉತ್ತರಿಸಿ ಅವರ ಪ್ರಯೋಗವನ್ನು ವಿವರಿಸಿದ್ದರು. ಅತಿಥಿಗಳು ಹಾಗೂ ಪಾಲಕರು ವಿದ್ಯಾರ್ಥಿಗಳ ವಿಜ್ಞಾನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

WhatsApp
Facebook
Telegram
error: Content is protected !!
Scroll to Top