ಸಂಗೀತ ನಿರ್ದೇಶಕ ಇಳಯರಾಜರಿಗೆ ದೇವಸ್ಥಾನ ಮಂಟಪ ಪ್ರವೇಶಿಸದಂತೆ ತಡೆ; ವ್ಯಾಪಕ ವಿರೋಧ

ತಮಿಳುನಾಡು: ಖ್ಯಾತ ಸಂಗೀತ ಸಂಯೋಜಕ ಮತ್ತು ರಾಜ್ಯಸಭಾ ಸಂಸದ ಇಳಯರಾಜರು ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಿದಾಗ ಅವರನ್ನು ಜೀಯರು ಹೊರಗೆ ಕಳುಹಿಸಿದ ಘಟನೆ ನಡೆದಿದೆ. ಇಳಯರಾಜ ಅನ್ನಕ್ಕಿಲಿ ಚಿತ್ರದ ಮೂಲಕ ಸಂಗೀತ ಸಂಯೋಜಕರಾಗಿ ಪಾದಾರ್ಪಣೆ ಮಾಡಿದರು. ಅವರು 45 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಸಂಗೀತದಿಂದ ತಮಿಳು ಚಿತ್ರರಂಗದ ಅಭಿಮಾನಿಗಳನ್ನು ಸೆಳೆದಿದ್ದಾರೆ.

ಇಳಯರಾಜರ ವಯಸ್ಸು 80 ದಾಟಿದ್ದರೂ ಸಂಗೀತ ಸಂಯೋಜಕರಾಗಿಯೇ ಉಳಿದಿದ್ದಾರೆ. ಸದ್ಯ ಅವರ ಸಂಗೀತದಲ್ಲಿ ‘ವಿಡುತಲೈ’ ಚಿತ್ರದ ಎರಡನೇ ಭಾಗ ಸಿದ್ಧವಾಗುತ್ತಿದೆ. ಚಿತ್ರವನ್ನು ಡಿಸೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಶ್ರೀವಿಲ್ಲಿಪುತ್ತೂರು

ಈ ಸಂದರ್ಭದಲ್ಲಿ ಶ್ರೀವಿಲ್ಲಿಪುತ್ತೂರಿನ ಪ್ರಸಿದ್ಧ ಆಂಡಾಳ್ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಇಳಯರಾಜ ಅಲ್ಲಿಗೆ ತೆರಳಿ ದೇವರ ದರ್ಶನ ಪಡೆದಿದ್ದರು. ಇಳಯರಾಜ ರನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಪರವಾಗಿ ಸ್ವಾಗತಿಸಲಾಯಿತು. ಇಳಯರಾಜ ಪೆರಿಯ ಪೆರುಮಾಳ್ ದೇಗುಲ, ನಂದವನಂ ಮತ್ತು ಆಂಡಾಳ್ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು

ಆ ವೇಳೆ ಆಂಡಾಳ್ ದೇವಸ್ಥಾನದ ಗರ್ಭಗುಡಿಯ ಮುಂಭಾಗದ ಅರ್ಧ ಮಂಟಪಕ್ಕೆ ಪ್ರವೇಶಿಸಲು ಯತ್ನಿಸಿದಾಗ ಅಲ್ಲಿದ್ದ ಜೀಯರು ಮತ್ತು ಭಕ್ತರು ಇಳಯರಾಜರನ್ನು ತಡೆದಿದ್ದು, ಕೋಲಾಹಲಕ್ಕೆ ಕಾರಣವಾಗಿತ್ತು. ಸ್ವಾಗತ ಸಮಾರಂಭದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿ ಇಳಯರಾಜ ರನ್ನು ಅಲ್ಲಿಂದ ಹೊರಹಾಕಿದರು. ನಂತರ ಇಳಯರಾಜ ದೇವಸ್ಥಾನದ ಅರ್ಧ ಮಂಟಪದಿಂದ ಹೊರಬಂದು ದೇವರ ದರ್ಶನ ಪಡೆದರು. ಬಳಿಕ ಅಲ್ಲಿನ ಅರ್ಚಕರು ಹೂಮಾಲೆ ಹಾಕಿ ನಮನ ಸಲ್ಲಿಸಿದರು. ಇಳಯರಾಜ ರನ್ನು ಅರ್ಧ ಮಂಟಪದಿಂದ ಹೊರಹಾಕಿದ ಘಟನೆ ಭಾರೀ ಸಂಚಲನ ಮೂಡಿಸಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇಂತಹ ಆಚರಣೆಗಳು ಮೇಲು ಕೀಳು ಎನ್ನುವುದನ್ನು ಮತ್ತೆ ಜೀವಂತವಾಗಿಡಲು ಕಾರಣವಾಗುತ್ತವೆ, ಜಾತಿ ಪದ್ಧತಿಯನ್ನು ಜೀವಂತವಾಗಿರಿಸುತ್ತವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಕೆಲವರು ಅಲ್ಲಿನ ಸಂಪ್ರದಾಯ ಇರುವುದೇ ಹಾಗೆ, ಅದನ್ನು ಅಲ್ಲಿನ ಪುರೋಹಿತರು ಪಾಲಿಸುತ್ತಿದ್ದಾರೆ. ತಿಳಿಯದೆ ಇಳಯರಾಜ ಒಳಗೆ ಪ್ರವೇಶ ಮಾಡಿದ್ದಾರೆ, ಅವರಿಗೆ ಅದನ್ನು ತಿಳಿಸಿದ ತಕ್ಷಣ ಹೊರಗೆ ಬಂದಿದ್ದಾರೆ. ವಿಡಿಯೋದಲ್ಲಿ ಯಾರೂ ಯಾರನ್ನೂ ಬಲವಂತಾಗಿ ಆಚೆ ಕಳಿಸಿಲ್ಲ ಅಥವಾ ನಿಂದಿಸಿಲ್ಲ. ಅಲ್ಲಿನ ಸಂಪ್ರದಾಯವನ್ನು ಪಾಲಿಸಲಾಗಿದೆ ಇದನ್ನು ವಿವಾದ ಮಾಡುವ ಅಗತ್ಯವಿಲ್ಲ ಎಂದು ಮತ್ತೊಂದಷ್ಟು ಜನ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಭಾನುವಾರ ತಿರುವಣ್ಣಾಮಲೈ ಜಿಲ್ಲಾಧಿಕಾರಿಗೆ ಕೂಡ ದೇವಸ್ಥಾನದೊಳಗೆ ಪ್ರವೇಶಿಸಲು ಬಿಟ್ಟಿರಲಿಲ್ಲ. ಈಗ ಇಳಯರಾಜ ಅವರಿಗೂ ಅರ್ಧಮಂಟಪ ಪ್ರವೇಶಿಸಲು ಬಿಡದೇ ಇರುವುದು ವಿವಾದಕ್ಕೆ ಕಾರಣವಾಗಿದೆ.

WhatsApp
Facebook
Telegram
error: Content is protected !!
Scroll to Top