ಭಟ್ಕಳ: ಸಾರದಹೊಳೆಯ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ನಾಮಧಾರಿ ಸಭಾಭವನದಲ್ಲಿ ಇಂದು ಜೂನ್ 16 ರಂದು ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಸ್ಥೆ, ಎಸ್. ಎಸ್. ಎಲ್. ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣಾ ಸಮಾರಂಭವನ್ನು ಹಮ್ಮಿಕೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಲ್ಲಾಪುರ ನಾಮಧಾರಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ರಾಮಚಂದ್ರ ಐ ನಾಯ್ಕ, 13 ವರ್ಷಗಳ ಹಿಂದೆ ಸಮಾನ ಮನಸ್ಕರು ಸೇರಿಕೊಂಡು ಈ ಸಂಘವನ್ನು ಹುಟ್ಟುಹಾಕಿ ಇಲ್ಲಿಯವರೆಗೂ ಸುಮಾರು ಐದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಿರುವುದು ನಿಜಕ್ಕೂ ಒಂದು ಮಹತ್ಕಾರ್ಯವಾಗಿದೆ. ಪುಸ್ತಕ ಪಡೆದ ವಿದ್ಯಾರ್ಥಿಗಳು
ತಾವು ಓದಿ ಜೀವನದಲ್ಲಿ ನೆಲೆ ಕಂಡುಕೊಂಡಾಗ ಇಂತಹ ಸಂಘ ಸಂಸ್ಥೆಯನ್ನು ಮರೆಯದೆ ಸಮಾಜದಲ್ಲಿ ಅಶಕ್ತರಾದವರ ನೆರವಿಗೆ ಮುಂದಾಗಬೇಕು, ವಿದ್ಯಾರ್ಥಿಗಳು ಯಾವುದೇ ಕೆಟ್ಟ ವ್ಯಸನಗಳಿಗೆ ಬಲಿಯಾಗದೆ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ
ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದು ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ಸಮಾಜದ ಬಲವರ್ಧನೆಗಾಗಿ ದುಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಮನಮೋಹನ ನಾಯ್ಕ, ನಾಮಧಾರಿ ಅಭಿವೃಧ್ಧಿ ಸಂಘ ಮಾವಳ್ಳಿ ಹೊಬಳಿಯ ಅಧ್ಯಕ್ಷರಾದ ಆರ್.ಕೆ ನಾಯ್ಕ, ವಿಶ್ರಾಂತ ಜಿಲ್ಲಾ ನ್ಯಾಯಾಧೀಶರಾದ ರವಿ ನಾಯ್ಕ, ಹೋಟೆಲ್ ಉದ್ದಿಮೆದಾರ ಮಂಜುನಾಥ ನಾಯ್ಕ, ಶ್ರಿ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷರಾದ ಕೆ.ಆರ್ ನಾಯ್ಕ, ನಾರಾಯಣ ನಾಯ್ಕ, ಪರಮೇಶ್ವರ ನಾಯ್ಕ, ಗಂಗಾಧರ ನಾಯ್ಕ ಮತ್ತಿತರು ಭಾಗವಹಿಸಿದರು.