ಉಡುಪಿ, ಮೇ 18: ಮೀನುಗಾರಿಕೆ ತೆರಳಿದ್ದ ಬೋಟ್‌ಗೆ ಸಮುದ್ರ ಮಧ್ಯೆ ಇನ್ನೊಂದು ಬೋಟ್ ಢಿಕ್ಕಿ ಹೊಡೆದ ಪರಿಣಾಮ ಮೀನುಗಾರಿಕೆ ಬೋಟ್ ಮುಳುಗಡೆಯಾಗಿದ್ದು, ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಬೋಟ್ ನಲ್ಲಿದ್ದ ಐದು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಮಲ್ಪೆ ವಡಭಂಡೇಶ್ವರ ಗೋಪಾಲ ಸುವರ್ಣ ಎಂಬವರ ಮಾಲಕತ್ವದ ಮಾಲ್ತಿದೇವಿ 370 ಬೋಟ್ ಮೇ 16ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗಾಗಿ ಭಟ್ಕಳ ಕಡೆಗೆ ತೆರಳಿತ್ತು. ಇದರಲ್ಲಿ ತಾಂಡೇಲ ಸುರೇಶ್ ಕುಂದರ್, ಮೀನುಗಾರರಾದ ಶಂಕರ ಕುಂದರ್, ಶಂಕರ ಪೂಜಾರಿ, ಯೋಗೇಂದ್ರ, ಫರೀದ ಅಬ್ದುಲ್ ಘನಿ ಶೇಖ್ ಇದ್ದರು.
ಮೇ 17ರಂದು ಬೆಳಗಿನ ಜಾವ ಭಟ್ಕಳ ಸಮೀಪ ಸುಮಾರು 12 ಮಾರು ದೂರದಲ್ಲಿ ಹೋಗುತ್ತಿದ್ದ ಬೋಟ್ ಗೆ ಶ್ರೀದುರ್ಗಾ ಬೋಟ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಪರಿಣಾಮ ಮಾಲ್ತಿದೇವಿ ಬೋಟ್‌ನ ಮಧ್ಯ ಭಾಗದ ಅಡಿ ಹಲಗೆಯು ಎದ್ದು ಹೋಗಿದ್ದು, ನೀರು ಒಳಗೆ ಬರಲು ಆರಂಭಿಸಿತು.
ಢಿಕ್ಕಿ ಹೊಡೆದ ದುರ್ಗಾ ಬೋಟು ಮತ್ತು ಹತ್ತಿರದಲ್ಲೇ ಇದ್ದ ಪಾಂಚಜನ್ಯ ಬೋಟ್ ನವರು ಮಾಲ್ತಿದೇವಿ ಬೋಟನ್ನು ಹಗ್ಗದಿಂದ ಕಟ್ಟಿ ಗಂಗೊಳ್ಳಿ ಬಂದರಿನ ಎಳೆದು ತರುವಾಗ ಗಂಗೊಳ್ಳಿ ಅಳಿವೆಯಿಂದ ಸುಮಾರು 8ರಿಂದ 10 ಮಾರು ದೂರ ಹಗ್ಗ ತುಂಡಾಯಿತು. ಇದರಿಂದ ಮಾಲ್ತಿದೇವಿ ಬೋಟ್ ನೀರಿನಲ್ಲಿ ಶೇ.90ರಷ್ಟು ಮುಳುಗಡೆಗೊಂಡಿತು. ಈ ವೇಳೆ ಈ ಬೋಟ್ ನಲ್ಲಿದ್ದ ಎಲ್ಲಾ ಮೀನುಗಾರರನ್ನು ದುರ್ಗಾ ಮತ್ತು ಪಾಂಚಜನ್ಯ ಬೋಟ್ನವರು ರಕ್ಷಿಸಿದ್ದು, ಯಾವುದೇ ಜೀವ ಹಾನಿಯಾಗಿರುವುದಿಲ್ಲ ಎಂದು ತಿಳಿದುಬಂದಿದೆ.
ಬೋಟ್‌ನಲ್ಲಿದ್ದ 1.90ಲಕ್ಷ ರೂ. ಮೌಲ್ಯದ 500 ಲೀಟರ್ ಡಿಸೇಲ್, ಎಂಟು ಟ್ರಾಲ್ ಬಲೆ, ಅಶೋಕ್ ಲೈಲ್ಯಾಂಡ್ ಇಂಜಿನ್, ಇತರೇ ಉಪಕರಣಗಳು ಸೇರಿದಂತೆ ಒಟ್ಟು 20,00,000ಲಕ್ಷ ರೂ. ನಷ್ಟ ಉಂಟಾಗಿದೆ. ಬಲೆ ಮತ್ತು ಇನ್ನಿತರ ಸಲಕರಣೆಗಳು ನೀರಿನಲ್ಲಿ ತೇಲಿ ಹೋಗಿರುವುದಾಗಿ ಕರಾವಳಿ ಕಾವಲು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.