ಭಟ್ಕಳ: ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಗೆ ಆಟೋ ಚಾಲಕನೊಬ್ಬ ರಸ್ತೆ ಮಧ್ಯ ಆಟೋ ನಿಲ್ಲಿಸಿ, ಲೈಂಗಿಕ ಕಿರುಕುಳ ನೀಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಪಾಲಕರ ಚಿಂತೆಗೆ ಕಾರಣವಾಗಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದೃಶ್ಯ ಮತ್ತಷ್ಟೂ ಆತಂಕಕ್ಕೆ ಕಾರಣವಾಗಿದ್ದು, ಬಾಲಕಿಯರಲ್ಲಿ ಜಾಗೃತಿ ಮೂಡಿಸುವಲ್ಲಿ ಪೊಲೀಸ್ ಇಲಾಖೆ, ಶಾಲೆಗಳು, ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ತಾಲೂಕಿನಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದು, ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯೊಬ್ಬಳೇ ಆಟೋದಲ್ಲಿದ್ದು ಮೊದಲು ಆತ ಹೊರಗಿನಿಂದಲೇ ಆಕೆಗೆ ಕಿರುಕುಳ ನೀಡಿದ್ದಾನೆ. ಬಳಿಕ ಚಾಲಕನ ಸೀಟಿನಲ್ಲಿ ಕುಳಿತು ಮತ್ತೆ ಆಕೆಗೆ ಚುಂಬಿಸುವಂತೆ ಒತ್ತಾಯಿಸಿದ್ದಾನೆ. ಆಕೆ ಬೇಡವೆಂದು ಕೈ ಮುಗಿದರೂ ಬಿಡದೇ ಸತಾಯಿಸಿದ್ದಾನೆ. ಮೊದಲು ಇಲ್ಲಿಂದ ತೆರಳು ಎಂದು ಕೈ ಸನ್ನೆ ಮಾಡಿದರೂ ಬಲವಂತವಾಗಿ ಮತ್ತೆ ಚುಂಬಿಸಿ ತನ್ನ ಆಟೋ ಚಲಾಯಿಸಿದ್ದಾನೆ. ಅಲ್ಲಿಯೇ ಎದುರಿಗಿದ್ದ ಮನೆಯಿಂದ ಯಾರೋ ಇದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಯಾವ ಸ್ಥಳವೆಂದು ನಿಖರವಾಗಿ ತಿಳಿದಿಲ್ಲ. ಕೆಲವರು ಇದು ಭಟ್ಕಳದ ಸಾಗರ ರಸ್ತೆಯಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದು ಭಟ್ಕಳದಲ್ಲಿ ನಡೆದ ಘಟನೆಯಲ್ಲ ಎನ್ನುತ್ತಿದ್ದಾರೆ. ಈ ಕುರಿತು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.